Friday 12 August 2016

*ಅಣ್ಣಾಮಲೈ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲು ಆಗ್ರಹ*

*ಅಣ್ಣಾಮಲೈ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲು ಆಗ್ರಹ*
  
ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಕಟು ಟೀಕೆಗಳು ಮತ್ತೆ ಮುಂದುವರಿದಿವೆ. ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಪೊಲೀಸರು ಅತ್ಯಂತ ದುರ್ಬಲ ಎಫ್ಐಆರ್‌ (ಪ್ರಥಮ ಮಾಹಿತಿ ವರದಿ) ಸಿದ್ಧಪಡಿಸಿದ್ದಾರೆ ಎಂದು ನ್ಯಾಯವಾದಿ ಶಾಂತಾರಾಮ ಶೆಟ್ಟಿ ಆರೋಪಿಸಿದ್ದಾರೆ. ಗುರುವಾರ ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಹಾಗೂ ಬಂಟ ಸಮುದಾಯದ ಮುಂದಾಳುಗಳ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಂತಾರಾಮ ಶೆಟ್ಟಿ ಅವರು, 'ನನ್ನ ಸುದೀರ್ಘ‌ ನ್ಯಾಯವಾದಿ ಸೇವಾವಯಲ್ಲಿ ಇಷ್ಟೊಂದು ದುರ್ಬಲ ಎಫ್ಐಆರ್‌ ನೋಡಿರಲಿಲ್ಲ. ತನಿಖಾಧಿಕಾರಿ ಅನಿವಾರ್ಯವಾಗಿ, ಅವಸರ ಅವಸರವಾಗಿ ಎಫ್ಐಆರ್‌ ಸಿದ್ಧಪಡಿಸಿರುವಂತಿದೆ. ಪೊಲೀಸರ ತನಿಖೆ ಇದೇ ರೀತಿ ಮುಂದುವರಿದರೆ ಭಾಸ್ಕರ ಶೆಟ್ಟಿಯವರ ಕುಟಂಬಕ್ಕಾಗಲಿ, ಸಮಾಜಕ್ಕಾಗಲಿ ನ್ಯಾಯ ಸಿಗುವುದು ಸಂದೇಹ. ಹಾಗಾಗಿ ಕೂಡಲೇ ಸರಕಾರ ತನಿಖಾಧಿಕಾರಿಯನ್ನಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು. ಚಿಕ್ಕಮಗಳೂರಿಗೆ ವರ್ಗವಾದ ಎಸ್‌ಪಿ ಅಣ್ಣಾಮಲೈ ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಿಸಬೇಕು' ಎಂದು ಒತ್ತಾಯಿಸಿದರು.
ಅಣ್ಣಾಮಲೈ ಅವರಿಗೆ ವರ್ಗವಾಗುವುದಕ್ಕಾಗಿ ಕಾದು ಅನಂತರ ಕೊಲೆ ನಡೆಸಿದ್ದಾರೆ ಎಂಬ ಸಾರ್ವಜನಿಕ ಊಹೆಗಳು ನಿಜವಾಗಿರುವ ಸಾಧ್ಯತೆ ಹೆಚ್ಚು. ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗವಾದ ಕೂಡಲೇ ಕೊಲೆ ನಡೆದಿದೆ. ಇದೊಂದು ಪೂರ್ವಯೋಜಿತ ಕೊಲೆ. ಆಸ್ತಿಗಾಗಿಯೇ ಈ ಕೃತ್ಯ ನಡೆದಿದೆ. ಆರಂಭದ ತನಿಖಾಧಿಕಾರಿಯಾಗಿದ್ದ ಗಿರೀಶ್‌ ಅವರ ಬದಲಿಗೆ ಎಎಸ್‌ಪಿ ಸುಮನ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆದರೆ ಸಾಮಾನ್ಯವಾಗಿ ಐಪಿಎಸ್‌ ಅಧಿಕಾರಿಗಳಿಗೆ ಇಂತಹ ಪ್ರಕರಣಗಳ ತನಿಖೆ ಅನುಭವ ಕಡಿಮೆ ಇರುತ್ತದೆ. ಅಣ್ಣಾಮಲೈ ಐಪಿಎಸ್‌ ಆಗಿದ್ದರೂ ಅವರಲ್ಲಿ ಸರಿಯಾದ ತನಿಖೆ ನಡೆಸುವ ಸಾಮರ್ಥ್ಯ ಇದೆ ಎಂದವರು ಹೇಳಿದರು.
ಅಪರೂಪದ ಪ್ರಕರಣ
ಆಯುಷಿ, ಇಂದ್ರಾಣಿ, ತಂದೂರ್‌ ಮೊದಲಾದ ಕೊಲೆ ಪ್ರಕರಣಗಳನ್ನು ಉಲ್ಲೇಖೀಸಿದ ಶೆಟ್ಟಿ ಅವರು 'ಅಗ್ನಿಕುಂಡದಲ್ಲಿ ಸುಡಲಾಗಿದೆ ಎನ್ನಲಾಗಿರುವ ಈ ಪ್ರಕರಣ ಅಪರೂಪದಲ್ಲಿ ಅಪರೂಪವಾದದ್ದು. ಆದರೆ ಪೊಲೀಸರು ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿಂದ ತನಿಖೆಯ ಎಲ್ಲ ಹಂತಗಳಲ್ಲೂ ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿಯೇ ವರ್ತಿಸಿದ್ದಾರೆ' ಎಂದು ಹೇಳಿದರು. ತನಿಖೆಯನ್ನು ಎಷ್ಟು ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿ ಆಗಿದೆ. ಆದಾಗ್ಯೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ತನಿಖಾಧಿಕಾರಿಯಾಗಿ ನೇಮಕಗೊಂಡರೆ ಸರಿಪಡಿಸಲು ಅವಕಾಶವಿದೆ. ಆ.12ರಂದು ಆರೋಪಿಗಳಾದ ರಾಜೇಶ್ವರಿ ಮತ್ತು ನವನೀತ್‌ ಶೆಟ್ಟಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಮತ್ತೂಮ್ಮೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡರೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 15 ದಿನಗಳವರೆಗೆ ಪೊಲೀಸ್‌ ಕಸ್ಟಡಿ ಪಡೆಯಲು ಅವಕಾಶವಿದೆ. ಇದುವರೆಗೆ 5 ದಿನಗಳ ಪೊಲೀಸ್‌ ಕಸ್ಟಡಿ ಮಾತ್ರ ಆಗಿದೆ ಎಂದರು.
ಸಮರ್ಪಕ ತನಿಖೆಗಾಗಿ ನಿರಂತರ ಒತ್ತಡ ಹಾಕುವ ಕೆಲಸ ನಡೆಯುತ್ತಿದ್ದು ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌.ಶೆಟ್ಟಿ, ಮಾತೃಸಂಘದ ಉಪಸಂಚಾಲಕ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಮನೋಹರ್‌ ಶೆಟ್ಟಿ, ನ್ಯಾಯವಾದಿ ಶಶಿಕಾಂತ ಶೆಟ್ಟಿ, ತಲ್ಲೂರು ಚಂದ್ರಶೇಖರ ಶೆಟ್ಟಿ, ಮೋಹನ ಶೆಟ್ಟಿ, ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.
ಸರಕಾರಿ ಅಭಿಯೋಜಕರಿಗೆ ಸಹಾಯ
ನಾನು ಮತ್ತು ನ್ಯಾಯವಾದಿ ಶಶಿಕಾಂತ ಶೆಟ್ಟಿ ಅವರು ಸರಕಾರಿ ಅಭಿಯೋಜಕರಿಗೆ ಸಹಾಯಕ ನ್ಯಾಯವಾದಿಗಳಾಗಿ ಕೆಲಸ ಮಾಡಲಿದ್ದೇವೆ. ಈ ರೀತಿಯಾಗಿ ಕೆಲಸ ಮಾಡಲು ಅವಕಾಶವಿದೆ ಎಂದ ಶಾಂತಾರಾಮ ಶೆಟ್ಟಿ ಅವರು, ಮೊದಲು ದಕ್ಷ ಅಧಿಕಾರಿ ತನಿಖಾಧಿಕಾರಿಯಾಗಲಿ. ಅನಂತರ ಸಿಒಡಿ ಅಥವಾ ಸಿಐಡಿ ತನಿಖೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ಮೂವರು ಮಾತ್ರ ಆರೋಪಿಗಳೆ?
ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾಗುವಾಗ ಅದರಲ್ಲಿರುವ ನಿಗದಿತ ಕಾಲಂನಲ್ಲಿ ಆರೋಪಿಗಳ ಹೆಸರು ಬರೆದು ಅನಂತರ 'ಇತರರು' ಎಂದು ಬರೆಯಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ ರಾಜೇಶ್ವರಿ ಶೆಟ್ಟಿ, ನವನೀತ್‌ ಶೆಟ್ಟಿ ಮತ್ತು ನಿರಂಜನ್‌ ಭಟ್‌ ಹೆಸರನ್ನು ಮಾತ್ರ ಉಲ್ಲೇಖೀಸಲಾಗಿದೆ. ಈ ಕೊಲೆ ಕೇವಲ ಮೂವರಿಂದ ಮಾತ್ರವೇ ನಡೆದಿರಲಿಕ್ಕಿಲ್ಲ ಎಂದು ಶಾಂತಾರಾಮ ಶೆಟ್ಟಿ ಹೇಳಿದರು. ಈಗ ಬಂಧಿತರಾಗಿರುವ ಆರೋಪಿಗಳ ಜತೆಗೆ ಕಾಣದ ಕೈಗಳು ಕೆಲಸ ಮಾಡಿರುವ ಬಗ್ಗೆ ಕುಟುಂಬಿಕರು ಮತ್ತು ಬಂಟ ಸಮುದಾಯದ ಮುಂದಾಳುಗಳು ಕೂಡ ಬಲವಾದ ಸಂದೇಹ ವ್ಯಕ್ತಪಡಿಸಿದರು.
ಕೇಸು ದಾಖಲಿಸಿದವರೇ ತನಿಖಾಧಿಕಾರಿ!
ಮಣಿಪಾಲ ವೃತ್ತ ನಿರೀಕ್ಷಕ ಗಿರೀಶ್‌ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಂತರ ಇವರೇ ತನಿಖೆ ನಡೆಸಿದ್ದಾರೆ. ಸಾಮಾನ್ಯವಾಗಿ ಪ್ರಕರಣ ದಾಖಲಿಸಿದ ಅಧಿಕಾರಿ ತನಗಿಂತ ಮೇಲಿನ ಹಂತದ ಅಧಿಕಾರಿಯವರಿಗೆ ಪ್ರಕರಣವನ್ನು ಹಸ್ತಾಂತರಿಸಿ ಅವರಿಂದ ತನಿಖೆಯಾಗುತ್ತದೆ. ಈ ಪ್ರಕರಣದಲ್ಲಿ ಡಿಎಸ್‌ಪಿ ಅಥವಾ ಎಎಸ್‌ಪಿಗೆ ಪ್ರಕರಣ ಹಸ್ತಾಂತರವಾಗಬೇಕಿತ್ತು ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
ಮೂಳೆಯೊಂದೇ ಸಾಕ್ಷ್ಯವಲ್ಲ
ಭಾಸ್ಕರ ಶೆಟ್ಟಿ ಶವ ನಾಶ ಮಾಡಲಾಗಿದೆ ಎಂದು ಹೇಳಲಾಗಿದ್ದರೂ ಅದರ ಅವಯವಗಳು ದೊರೆಯುವ ಸಾಧ್ಯತೆಗಳು ಇರುತ್ತವೆ. ಆದರೆ ಸರಿಯಾದ ತನಿಖೆ ನಡೆಯಬೇಕಷ್ಟೆ. ಈಗ ಎಲುಬು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇವಲ ಎಲುಬನ್ನು ಪೊಲೀಸರು ಹಿಡಿದುಕೊಂಡು ಬಂದು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನೀಡಿ ಅಲ್ಲಿ ಅದು ಯಾವುದೋ ಪ್ರಾಣಿಯ ಎಲುಬು ಎಂದು ತಿಳಿದುಬಂದರೆ ಆಗ ಪ್ರಕರಣವೇ ಅಂತ್ಯ ಗೊಳ್ಳಬಹುದು. ಹಾಗಾಗಿ ಇತರ ಅವಯವಗಳ ಹುಡುಕಾಟ, ಇತರ ಅಂಶಗಳ ತನಿಖೆಯಾಗಬೇಕು ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
'ತಂದೂರ್‌'ಗಿಂತಲೂ ದೊಡ್ಡ  ಕೇಸ್‌
1995ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ತಂದೂರ್‌ ಕೊಲೆ ಪ್ರಕರಣಕ್ಕಿಂತಲೂ ಇಲ್ಲಿ ನಡೆದಿರುವ ಹೋಮಕುಂಡದ ಪ್ರಕರಣ ದೊಡ್ಡದೆನಿಸುತ್ತದೆ. ತಂದೂರ್‌ ಪ್ರಕರಣದಲ್ಲಿ ಸುಶೀಲ್‌ ಶರ್ಮಾ ತನ್ನ ಹೆಂಡತಿಯನ್ನು ಕೊಂದಿದ್ದ. ಅನಂತರ ಶವವನ್ನು ತಂದೂರ್‌ ಮಾಡುವ ಕಾವಲಿಗೆ ಹಾಕಿ ಸುಡಲಾಗಿತ್ತು. ಅಲ್ಲಿ ದೇಹದ ಕೆಲವು ಅವಯವಗಳು ಸುಟ್ಟ ಸ್ಥಿತಿಯಲ್ಲಿ ದೊರೆತಿದ್ದವು. ಆರೋಪಿ ಇಂದಿಗೂ ಜೈಲಿನಲ್ಲಿದ್ದಾನೆ. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿಯೂ ದೇಹದ ಯಾವುದಾದರೂ ಭಾಗಗಳು ದೊರೆಯುವ ಸಾಧ್ಯತೆಗಳಿವೆ. ಪೊಲೀಸರು ಸೂಕ್ತ ರೀತಿ ತನಿಖೆ ನಡೆಸಿ ಸರಿಯಾದ ಚಾರ್ಜ್‌ಶೀಟ್‌ ಸಲ್ಲಿಸಬೇಕು. ಆರೋಪಿಗಳನ್ನು ಮಂಪರು ಪರೀಕ್ಷೆಗೂ ಒಳಪಡಿಸಬೇಕು. ದಕ್ಷ ಅಧಿಕಾರಿಯನ್ನು ನೇಮಕ ಮಾಡಲು ಒತ್ತಡ ಹಾಕಬೇಕು. ಈ ಬಗ್ಗೆ ಈಗಾಗಲೇ ಸಚಿವ ಪ್ರಮೋದ್‌ ಭರವಸೆ ನೀಡಿದ್ದಾರೆ ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
By- Smart News

No comments:

Post a Comment